Thursday 4 August 2011

ಭಯೋತ್ಪಾದನೆಗಿಲ್ಲ ಭಗವದೀತೆಗೇಕೆ ಅಪಸ್ವರ?

ರಾಷ್ಟ್ರವ್ಯಾಪಿ ಭಯೋತ್ಪಾದಕರ ಕುಕೃತ್ಯಗಳು ವಿಜ್ರಂಭಿಸುತ್ತಿವೆ.ಅದೆಷ್ಟೋ ಅಮಾಯಕರು ಬಾಂಬ್ ಧಾಳಿಗೆ ಸಿಲುಕಿ ಮೃತಪಟ್ಟರೆ ಹಲವು ನತದೃಷ್ಟರು ಗಾಯಾಳುಗಳಾಗಿದ್ದಾರೆ. ವಿಚಾರವಾದಿಗಳು ಅನ್ನಿಸಿಕೊಂಡವರು ಈ ಕುರಿತು ಚಿಂತನ-ಮಂಥನವನ್ನು ಹರಿಬಿಡದೇ... ಭಗವದ್ಗೀತೆಯನ್ನು ಉಲ್ಲೇಖಿಸಿ ಮನಸೋ ಇಚ್ಛೆ ಟೀಕಿಸುವ ಪರಿ ಬುದ್ಧಿಜೀವಿಗಳೆನಿಸಿಕೊಂಡವರಿಗೆ ತಕ್ಕುದೇ? ಈ ಚರ್ಚೆ ಪಸರಿಸಿದೆ ಭಯೋತ್ಪಾದನೆಗಿಲ್ಲ ಭಗವದೀತೆಗೇಕೆ  ಅಪಸ್ವರ?
ಎಂಬ ಪ್ರಶ್ನೆ ಮನೆ-ಮನಗಳಲ್ಲಿ ಮೂಡಿದೆ.
ಉತ್ತರಕನ್ನಡ ಜಿಲ್ಲೆಯ ಸೋಂದಾ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತೀ ಶ್ರೀಗಳು ರಾಜ್ಯದ ೨೫ ಜಿಲ್ಲೆಗಳಲ್ಲಿ ಭಗವದ್ಗೀತಾ ಅಭಿಯಾನವನ್ನು ಕಳೆದ ಮೂರು-ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನೆಡೆಸಿಕೊಂಡು ಬಂದಿದ್ದಾರೆ ಭಗವದ್ಗೀತೆಯ ಕುರಿತು ಯಾರೂ ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿರಲಿಲ್ಲ. ಈಚೆಗೆ ಕೋಲಾರದಲ್ಲಿ ಎಸ್.ಎಫ್.ಐನ ಐದಾರು ಮಂದಿ ಭಗವದ್ಗೀತೆಯ ಅಭಿಯಾನದ ಆವರಣದಲ್ಲಿ `ಗದ್ದಲ` ಎಬ್ಬಿಸಿದ ನಂತರ ಕೆಲವರು ಏಕಾಏಕಿ ಭಗವದ್ಗೀತೆಯ ಕುರಿತು ಹಾಗೂ ಅಭಿಯಾನದ ಕುರಿತು ಟೀಕಿಸಲಾರಂಭಿಸಿದ್ದು...ಭಗವದ್ಗೀತೆಗೆ ರಾಜಕೀಯ ಬಣ್ಣ ಬಳಿಯುವ ಹುನ್ನಾರ? ಆರಂಭ ಕಂಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಭಗವದ್ಗೀತೆ ಧರ್ಮ ಪ್ರಸಾರಕ  ಗ್ರಂಥವಲ್ಲ.ಇದು ಸಮಗ್ರ ಮನುಕುಲಕ್ಕೆ ದಾರಿದೀಪ ಎಂಬುದು ಪ್ರಾಜ್ಞರ ಅಭಿಮತವಾಗಿದೆ.ಭಗವದ್ಗೀತೆ ಮನುಷ್ಯನ ಮನೋವಿಕಾಸದ ದಾರಿಯನ್ನು ಭೋಧಿಸುವ ಮನಃಶಾಸ್ತ್ರ ಎಂದು ಮನೋವಿಜ್ಞಾನಿಗಳೇ  ಅಭಿಪ್ರಾಯಿಸಿದ್ದಿದೆ.
ಇದೊಂದು ಯೋಗಗ್ರಂಥ. ಭಗವದ್ಗೀತೆ ಒಂದು ಅಮೂಲ್ಯ ಜೀವನ ವಿಜ್ಞಾನ (ಸೈನ್ಸ್ ಆಫ್ ಲೀವಿಂಗ್). ಭಗವದ್ಗೀತೆಯು ರಾಷ್ಟ್ರೀಯ ಗ್ರಂಥ. ಇದು ಮತೀಯ ಗ್ರಂಥವಲ್ಲ. ಗೀತೆಯ ಕುರಿತಾಗಿ ಇಷ್ಟೋಂದು ವಿಶೀಷ ಉಲ್ಲೇಖಗಳಿರುವಾಗ... ಕೆಲವರು ಜಾತ್ಯಾತೀತ,ಸೆಕ್ಯುಲರ್ ಶಬ್ದಬಳಸಿ ತಾರ್ಕಿಕ ವಾದದೊಳಗೆ ಭಗವದ್ಗೀತೆಯನ್ನು ಸಿಲುಕಿಸುವ ಯತ್ನನಡೆಸಿದ್ದಾರೆ.ವ್ಯಂಗ್ಯವೆಂದರೆ ಭಗವದ್ಗೀತೆಯನ್ನು ಓದದವರೂ.. ಅರ್ಥೈಸಿಕೊಳ್ಳದವರೂ ಹೇಳಿಕೆಗಳ ಪುಂಗಿ ಊದುತ್ತಿದ್ದಾರೆ
ಅಭಿಯಾನ ಆರಂಭಗೊಂಡು ಸುದಿರ್ಘಅವದಿಯ ನಂತರ ಭಗವದ್ಗೀತೆಯನ್ನು ಹಾಗೂ ಗೀತಾ ಅಭಿಯಾನವನ್ನು ಪ್ರಶ್ನಿಸುತ್ತಾರೆಂದರೆ...ಪ್ರಶ್ನಿಸುವ ಮಂದಿ ಇಷ್ಟುದಿನ ಎಲ್ಲಿ ಕಳೆದುಹೋಗಿದ್ದರು? ಎಂಬ ಸಂದೇಹ,ಸಂಶಯ ಒಡಮೂಡುವುದು ಸಹಜವಲ್ಲವೇ? ಈ ಹಿನ್ನೆಲೆಯಲ್ಲಿ ಗೀತಾ ಅಭಿಯಾನದ ರೂವಾರಿ  ಸೋಂದಾ ಸ್ವರ್ಣವಲ್ಲಿ ಶ್ರೀಗಳೊಂದಿಗೆ `ಕರ್ಮವೀರ` ವಿಶೇಷ ಸಂದರ್ಶನ ನಡೆಸಿದೆ ಹುಟ್ಟುಹಾಕಲ್ಪಟ್ಟ ಹಲವು ಪ್ರಶ್ನೆಗಳಿಗೆ ಶ್ರೀಗಳು ಉತ್ತರಿಸಿದ್ದಾರೆ.
ಕರ್ಮವೀರ: ಕಳೆದ ಮೂರು ವರ್ಷದಿಂದಲೂ ರಾಜ್ಯದಲ್ಲಿ ಎಲ್ಲರ ವಿಚಾರ ಗೀತಾಅಭಿಯಾನದ ಪರವಾಗಿಯೆ ಇತ್ತು. ಕೋಲಾರದ ಘಟನೆ ಭಗವದ್ಗೀತಾ ಅಭಿಯಾನದ ವಿರುದ್ಧವಾಗಿ ಧ್ವನಿಯನ್ನು ಹುಟ್ಟುಹಾಕಿತು.ಈ ಬಗ್ಗೆ ತಾವು ಏನು ಹೇಳುತ್ತೀರಿ?
ಶ್ರೀಗಳು: ಭಗವದ್ಗೀತಾ ಅಭಿಯಾನ ಪ್ರಾರಂಭವಾಗಿ ಮೂರುವರೆ ವರ್ಷವಾಯ್ತು.ಅದರ ತಯಾರಿ ಆರಂಭಗೊಂಡು ನಾಲ್ಕುವರೆ ವರ್ಷವೇ ಆಗಿದೆ.ಬೇರೆಬೇರೆ ಜಿಲ್ಲೆಗಳಲ್ಲೆಲ್ಲ ನಡೆದಿದೆ. ಈ ಹಿಂದೆ ಯಾವುದೇ ಜಿಲ್ಲೆಯಲ್ಲಿಯೂ ವಿರೋಧ ವ್ಯಕ್ತವಾಗಿಲ್ಲ ಎಂದಿಲ್ಲ. ಆದರೆ ಬಹಳ ಸ್ವಲ್ಪ ವ್ಯಕ್ತವಾಗಿತ್ತು.ಅಲ್ಲದೇ ಅದು ರಾಜ್ಯವ್ಯಾಪ್ತಿಯನ್ನು ಪಡೆದಿರಲಿಲ್ಲ. ಎಲ್ಲೋ ಸಣ್ಣಧ್ವನಿ ಎದ್ದಿತ್ತು. ಅದು ತಾನಾಗಿಯೇ ಸುಮ್ಮನಾಯ್ತು. ಅದಕ್ಕೆ ಯಾರೂ ಉತ್ತರವನ್ನು ಕೊಡಲಿಲ್ಲ.ಚರ್ಚೆಯೂ ನೆಡೆಯಲಿಲ್ಲ. ಹಾಗೆ ಒಂದೆರೆಡುಕಡೆ ಆಗಿದ್ದಿದೆ.ಅದರ ಹೊರತಾಗಿ ಮತ್ಯಾವುದೇ ಜಿಲ್ಲೆಯಲ್ಲೂ ವಿರೋಧ ವ್ಯಕ್ತವಾಗಿರಲಿಲ್ಲ.

ಕೋಲಾರದ ಘಟನೆ ಇಷ್ಟು ವ್ಯಪ್ತಿಯನ್ನು ಪಡೆಯಲಿಕ್ಕೆ ಮುಖ್ಯ ಕಾರಣ ಮಾಧ್ಯಮಗಳೂ ಇರಬಹುದು.ಏಕೆಂದರೆ ಅಲ್ಲಿ ಆಗಿರುವ ಘಟನೆಯನ್ನು ತಕ್ಷಣ ರಾಜ್ಯವ್ಯಾಪಿಯಾಗಿ ಪ್ರಸಾರ ಮಾಡಿದವು ಮತ್ತು ಅತೀ ರಂಜಿತವಾಗಿ ಪ್ರಸಾರ ಮಾಡಲಾಯಿತು.ಹೀಗಾಗಿ ಈ ಘಟನೆ ರಾಜ್ಯವ್ಯಾಪಿಯಾಗಿ ಹರಡಿ ಭಗವದ್ಗೀತೆಯ ಕುರಿತಾಗಿ ಚಿಂತನೆ ನೆಡೆಸಲು ಕಾರಣವಾಯಿತು. ಈ ಬಗ್ಗೆ ಚಿಂತನೆ ನಡೆಯಲಿ. ಯಾಕೆಂದರೆ ಎಷ್ಟು ಪ್ರಶ್ನೆಗಳನ್ನು ಕೇಳಿದರೂ,ಎಷ್ಟು ಚರ್ಚೆಮಾಡಿದರೂ...ಎಲ್ಲದಕ್ಕೂ ಉತ್ತರ ಕೊಡುವ ಸಾಮರ್ಥ್ಯ ಭಗವದ್ಗೀತೆಗೆ ಇದೆ. ಚಿಂತನೆ-ಚರ್ಚೆಯನ್ನು ನಾವು ಯಾವಾಗಲೂ ಅಲ್ಲಗಳೆಯುವದಿಲ್ಲ. ಆಗ್ರಹಪೂರ್ವಕವಾದ ಚರ್ಚೆ ಬೇಡ. ಮತ್ತೆ ಇದನ್ನು ರಾಜಕೀಯಕ್ಕೆ ಹಚ್ಚಬಾರದು. ರಾಜಕೀಯ ಸಂಬಂಧ ಕಲ್ಪಿಸಬಾರದು.
ಕರ್ಮವೀರ: ಕೋಲಾರದ ಘಟನೆಯ ನಂತರ, ವಿಚಾರವಾದಿಗಳು ಎಂದು ಗುರುತಿಸಿಕೊಂಡವರು ನಾಡಿನಜನತೆಯ ದಿಕ್ಕು ತಪ್ಪಿಸುತ್ತಾ ಇದ್ದಾರೆ ಎನ್ನುವ ಭಾವನೆಇದೆ. ಈ ವಿಚಾರವಾಗಿ ತಮ್ಮ ಅಭಿಪ್ರಾಯವೇನು?
ಶ್ರೀಗಳು: ಇದು ಸತ್ಯವಾದ ಸಂಗತಿ.ವಿಚಾರವಂತರು ಎಂದು ಗುರುತಿಸಿಕೊಂಡವರೆಲ್ಲರೂ ಸಾರ್ವಜನಿಕವಾಗಿ ಇಷ್ಟರವರೆಗೆ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿಲ್ಲ. ಕೆಲವರು ಮಾತ್ರ ಹೇಳಿದ್ದಾರೆ. ಆದರೆ ವಿಚಾರವಂತರು ಎನಿಸಿಕೊಂಡವರೂ ಕೂಡಾ ಈ ಅಭಿಯಾನವನ್ನು ಸರಕಾರದ್ದು ಅಥವಾ ಬಿ.ಜೆ.ಪಿ ಪಕ್ಷದ್ದು ಅಥವಾ ಆರ್.ಎಸ್.ಎಸ್.ನವರದ್ದು ಎಂದು ವ್ಯಾಖ್ಯಾನ ಮಾಡಿಕೊಂಡಿದ್ದಾರೆ ಇದು ತಪ್ಪು.... ಇದು ಅವರು ತಪ್ಪಾಗಿ ಮಾಡುತ್ತಿರುವ ಆಲೋಚನೆ. ಭಗವದ್ಗೀತೆಯಂತಹ ನೈತಿಕ,ಆಧ್ಯಾತ್ಮಿಕ ಮೌಲ್ಯಗಳನ್ನು ಭೊದಿಸುವಂತ ಗ್ರಂಥವನ್ನು ಎಲ್ಲಾ ರಾಜಕೀಯ ಪಕ್ಷದವರೂ ಎಲ್ಲಾ ವಿಚಾರವಂತರೂ ತಾಮುಂದು ತಾಮುಂದು ಎಂದು ಬೆಂಬಲಿಸಬೇಕಾಗಿತ್ತು. ಇದನ್ನು ಬೆಂಬಲಿಸುವುದೇ ಪ್ರತಿಷ್ಠೆ ಎನ್ನುವಂತಿದೆ ನಿಜವಾಗಿ ಈ ಗ್ರಂಥ. ಅದರ ಬದಲಾಗಿ ವಿಚಿತ್ರವಾಗಿ ಟೀಕಿಸುವದರ ಮೂಲಕ ಜನತೆಗೆ ತಪ್ಪು ಮಾರ್ಗದರ್ಶನ ಮಾಡುತ್ತಿದ್ದಾರೆ ಎನ್ನುವುದು ವಿಷಾದದ ಸಂಗತಿ. ಆದರೆ ನಮ್ಮ ಜನರಲ್ಲಿ ಎಲ್ಲರೂ ಅದಕ್ಕೆ ಮರುಳಾಗಲಿಲ್ಲ ಬಹಳ ಜನರು  ಅದನ್ನು ಸ್ವಯಂಪ್ರೇರಣೆಯಿಂದ ಬೆಂಬಲಿಸುತ್ತಿದ್ದಾರೆ. ಇದು ಸಮಾದಾನದ ಸಂಗತಿ.
ಕರ್ಮವೀರ: ಭಗವದ್ಗೀತೆ ಎಲ್ಲಾಧರ್ಮದವರಿಗೂ ಮಾದರಿ ಎನ್ನುವದಕ್ಕೆ ಪ್ರಭಲವಾದ ಉಲ್ಲೇಖವೇನು?
ಶ್ರೀಗಳು:ಒಂದಲ್ಲ ಹತ್ತಾರು ಹೇಳಬಹುದು. ಭಗವದ್ಗೀತೆ ಎಲ್ಲಾ ಮನುಷ್ಯರನ್ನು ಉದ್ದೆಶಿಸಿ ಹೇಳುತ್ತದೆ.ಯಾವುದೇ ಒಂದು ಜನಾಂಗವನ್ನು, ಅಥವಾ ಯಾವುದೇ ಒಂದು ಸೀಮಿತಪದೇಶದ ಜನಾಂಗವನ್ನು ಉದ್ದೇಶಿಸಿ ಹೇಳುವದೇ ಇಲ್ಲ. ಎಲ್ಲಾ ಮನುಷ್ಯನೂ ಕೂಡಾ  ಪರಮಾತ್ಮನ ಒಂದು ಅಂಶ."ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ" ಈಮಾತು ಪ್ರತಿಯೊಂದು ಮನುಷ್ಯನಿಗೂ ಅನ್ವಯಿಸುತ್ತದೆ. ಅಷ್ಟೇ ಅಲ್ಲ ಎಲ್ಲ ಪ್ರಾಣಿಗಳಿಗೂ ಪ್ರತೀ ಜೀವಕ್ಕೂ ಅನ್ವಯಿಸುತ್ತದೆ. "ಸರ್ವಸ್ಯ ಚಾಹಂ ಹೃದಿಸನ್ನಿವಿಷ್ಟಃ" ಪ್ರತಿಯೊಂದು ಜಿವದ ಅಂತರಂಗದಲ್ಲಿ ನಾನಿದ್ದೇನೆ ಎಂದು ಭಗವಂತ ಹೇಳುತ್ತಾನೆ. ಎಲ್ಲರ ಒಳಗಿರುವ ಅದ್ಭುತವಾದ ಚೈತನ್ಯವನ್ನು ಭಗವದ್ಗೀತೆ ಪ್ರತಿಪಾದನೆ ಮಾಡುತ್ತದೆ ಇಲ್ಲಿ ಅವನು-ಇವನು, ಮನುಷ್ಯ-ಪ್ರಾಣಿ ಎನ್ನುವ ಆಲೋಚನೆಯೆ ಭಗವದ್ಗೀತೆಯಲ್ಲಿ ಇಲ್ಲ. ಎಲ್ಲರ ಏಳ್ಗೆಯನ್ನು ಭಗವದ್ಗೀತೆ ಬಯಸುತ್ತದೆ.  ಇವತ್ತು ನಾವು ಕಾಣುತ್ತಿರುವ ವರ್ಗೀಕೃತ ಸಮಾಜ ಇದೆಯಲ್ಲ.. ಅದು ಭಗವದ್ಗೀತೆಯಲ್ಲಿ ಇಲ್ಲ ಇಣ್ದು ಬೇರೆ-ಬೇರೆ ಜಾತಿಯ ಹೆಸರಿನಲ್ಲಿ ಸಮಾಜವನ್ನು ಬೇಕಾದಷ್ಟು ಒಡೆದುಕೊಂಡಿದ್ದೆವೆ. ಆದಾರಿಯಲ್ಲಿ ಬಹಳಷ್ಟು ಮುಂದೆ ಬಂದುಬಿಟ್ಟಿದ್ದೇವೆ.ಭಗವದ್ಗೀತೆಯ ಚಿಂತನೆಯೊಳಗೆ ಈ ವಿಚಾರ ಇಲ್ಲ. ಎಲ್ಲರನ್ನು ಆದ್ಯಾತ್ಮಿಕ, ನೈತಿಕ ಮಾರ್ಗದಲ್ಲಿ  ಹೇಗೆ ಮೇಲೆತ್ತಬಹುದು ಎನ್ನುವುದು ಭಗವದ್ಗೀತೆಯ ಚಿಂತನೆ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಮೋಹ ,ಶೋಕ ಎಂಬ ಎರಡು ದೋಶಗಳಿರುತ್ತವೆ. ತನ್ನದೆನ್ನುವ ಮಮಕಾರವನ್ನು ಮತ್ತು ಅನೇಕ ವಿಧದ ತಪ್ಪು ತಿಳುವಳಿಕೆಯನ್ನ ಮೋಹ ಎನ್ನುತ್ತಾರೆ ಇದರಿಂದ ಬರುವ ಚಿಂತೆಯೇ ಶೋಕ ಇವೆರೆಡೂ ಎಲ್ಲ ಪ್ರಾಣಿಗಳಿಗೂ ಇರುತ್ತವೆ.
 ಮನುಷ್ಯನಿಗೆ ಸ್ವಲ್ಪ ಹೆಚ್ಚಿಗೆ ಇರುತ್ತವೆ. ಪ್ರತಿಯೊಬ್ಬ ಮನುಷ್ಯನಿಗೆ ಅಂತರಂಗದಲ್ಲಿರುವ ಶೋಕ ಅಥವಾ ದುಃಖವನ್ನು ಸ್ವತಃ ನಿವಾರಿಸಿಕೊಳ್ಳುವ ಮಾನಸಿಕ ಚಿಕಿತ್ಸೆಯನ್ನು ಭಗವದ್ಗೀತೆ ಕೊಡುತ್ತದೆ. ಇಲ್ಲೆಲ್ಲೂ ಸೀಮಿತ ದೃಷ್ಟಿ ಕಂಡುಬರುವುದೇ ಇಲ್ಲ ಭಗವದ್ಗೀತೆಯಲ್ಲಿ  ಸೀಮಿತ ದೃಷ್ಟಿ ಇದೆ ಎನ್ನುವವರು ಸರಿಯಾದ ಯಾವುದೆ ಉಲ್ಲೆಖವನ್ನು ನಮಗೆ ಕೊಡಲಿಲ್ಲ. ಕೊಡಲಿಕ್ಕೂ ಸಾಧ್ಯವಿಲ್ಲ.
ಕರ್ಮವೀರ: ನಮ್ಮ ರಾಷ್ಟ್ರದ ಸಂವಿಧಾನದಲ್ಲಿ ಸೆಕ್ಯುಲರ್(ಧರ್ಮ ನಿರಪೇಕ್ಷ) ಎಂಬ ಶಬ್ಧ ಇದೆ. ಸಂವಿಧಾನದಲ್ಲೆ ಈ ರೀತಿ ಇರುವಾಗ ಶಾಲೆಗಳಲ್ಲಿ ಭಗವದ್ಗೀತೆಯನ್ನು ಭೋಧಿಸುವದು ಎಷ್ಟರ ಮಟ್ಟಿಗೆ ಸರಿ?
ಶ್ರೀಗಳು: ನಮ್ಮ ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರವನ್ನೂ ಕೊಟ್ಟಿದ್ದಾರೆ. ಧರ್ಮಾನುಷ್ಠಾನವನ್ನು ಮಾಡಲಿಕ್ಕೆ ಪ್ರತಿಯೊಬ್ಬರಿಗೂ ಸ್ವಾತಂತ್ರ್ವನ್ನು ನೀಡಿದ್ದಾರೆ. ಸರಕಾರ ಯಾವುದೇ ಒಂದೇ ಧರ್ಮವನ್ನು ಬೆಂಬಲಿಸಬಾರದು. ಇದು ಸೆಕ್ಯುಲರ್ ಶಬ್ಧದ ನಿಜವಾದ ತಾತ್ಪರ್ಯ. ನಮ್ಮ ದೃಷ್ಟಿಯಲ್ಲಿ ಸೆಕ್ಯುಲರ್ ಎನ್ನುವುದು ಸಂವಿಧಾನದ ಪಾರಿಭಾಷಿಕ ಶಬ್ಧ. ಸರ್ವ ಧರ್ಮಗಳಿಗೂ ಸಮಾನವಾದ ಗೌರವ ಎಂದರ್ಥ. ಆ ಅರ್ಥದಲ್ಲಿ ಇದು  ಪಾರಿಭಾಷಿಕ ಶಬ್ಧ. ಹೊರತು ಧರ್ಮವೇ ಬೇಡ ಎನ್ನುವ ಅರ್ಥವಲ್ಲ. ಆಡಳಿತ ದೃಷ್ಟಿಯಲ್ಲಿ ಎಲ್ಲ ಧರ್ಮಗಳೂ ಒಂದೆ ಎಂದು ಅರ್ಥಮಾಡಿಕೊಳ್ಳಬೇಕು. ಸೆಕ್ಯುಲರ್ ಎನ್ನುವ ಶಬ್ಧಕ್ಕೆ ಧರ್ಮನಿರಪೇಕ್ಷ ಎನ್ನುವ ಅರ್ಥಕ್ಕೆ ನಮ್ಮ ಒಪ್ಪಿಗೆ ಇಲ್ಲ. ಇದಕ್ಕೆ ಬದಲಾಗಿ 'ಎಲ್ಲ ಧರ್ಮಗಳೂ ಸಮಾನ' ಎನ್ನುವ ಅರ್ಥ ಸರಿ ಎಂದು ನಮ್ಮ ಅಭಿಪ್ರಾಯ.
ಯಾಕೆಂದರೆ ಪ್ರತಿಯೊಬ್ಬ ಮನಿಷ್ಯನ ಜೀವನಕ್ಕೆ ಧರ್ಮ ಎನ್ನುವುದು ಬೇಕು. ಅದಿಲ್ಲದಿದ್ದರೆ  ಜೀವನದಲ್ಲಿ ಶಾಶ್ವತವಾದ ನೆಮ್ಮದಿ,ಶಾಂತಿಯನ್ನು ಪಡೆಯಲಿಕ್ಕೆ ಸಧ್ಯವೇ ಇಲ್ಲ. ಈ ದೇಶದವನೇ ಇರಬಹುದು ಅಥವಾ ಬೇರೆ ದೇಶದವನೇ ಇರಬಹುದು. ಎಲ್ಲ ದೇಶದಲ್ಲೂ   ಇದೆ. ಧರ್ಮ ಸಂಪೂರ್ಣವಾಗಿ ಇಲ್ಲದ ಯಾವುದೇ ದೇಶ ಪ್ರಪಂಚದಲ್ಲಿ ಇಲ್ಲ. ಸೆಕ್ಯುಲರ್ ಶಬ್ಧಕ್ಕೆ ಧರ್ಮವೇ ಬೇಡ ವ್ಯಾಖ್ಯಾನಮಾಡುವುದು ಸಂವಿಧಾನಕಾರರ ಅಭಿಪ್ರಾಯವಲ್ಲ. ಏಕೆಂದರೆ ಧಾರ್ಮಿಕ ಸ್ವಾತಂತ್ರ ಕೊಟ್ಟಿದ್ದಾರೆ. ಧರ್ಮವೇ ಬೇಡ ಎಂದಿದ್ದರೆ ಧಾರ್ಮಿಕ ಸ್ವಾತಂತ್ರ ಕೊಡುತ್ತಿರಲಿಲ್ಲ.ಆದ್ದರಿಂದ ಸೆಕ್ಯುಲರ್ ಎನ್ನುವ ಶಬ್ಧಕ್ಕೆ ಧರ್ಮನಿರಪೇಕ್ಷ  ಎಂದು ಅರ್ಥೈಸುವದು ಸರಿಯಲ್ಲ. ನಮ್ಮ ದೃಷ್ಟಿಯಲ್ಲಿ ಸರ್ವಧರ್ಮ ಸಮಭಾವ ಎನ್ನುವ ದೃಷ್ಟಿ ಇಟ್ಟುಕೊಳ್ಳಬೇಕು ಒಂದಿಷ್ಟು  ಧಾರ್ಮಿಕ ನಂಬಿಕೆಗಳು ಮನುಷ್ಯನಿಗೆ ಬೇಕು. ಸೆಕ್ಯುಲರ್ ಎಂಬ ಘೋಷಣೆಯಿರುವ ನಮ್ಮ ಸಂವಿಧಾನದ ಬಗ್ಗೆ ನಮಗೆ ಗೌರವ ಇದ್ದೆ ಇದೆ ಅಂಥ ಸಂವಿಧಾನವನ್ನು ಅನುಸರಿಸಿಕೊಂಡು ಬಂದಿದ್ದರೂ ಭಗವದ್ಗೀತೆಯನ್ನು ಹೇಳುವದಕ್ಕೆ  ಏನೂ ತೊಂದರೆ ಇಲ್ಲ.
ಕರ್ಮವೀರ: ಭಗವದ್ಗೀತೆಯಲ್ಲಿ ಸಾಮಾಜಿಕ ನ್ಯಾಯ ಇದೆ ಎನ್ನುವದಕ್ಕೆ ಏನು ಉಲ್ಲೆಖ?
ಶ್ರೀಗಳು:ಸಾಮಾಜಿಕ ನ್ಯಾಯ ಎಂದರೆ ಸಮಾನತೆ ಎಂದು ಅರ್ಥವನ್ನಿಟ್ಟುಕೊಂಡು ಕೆಳುತ್ತಿದ್ದೀರಿ ತಾನೆ? ಭಗವದ್ಗೀತೆ ಮುಖ್ಯವಾಗಿ 'ಸಮತ್ವ' ಮತ್ತು 'ಸಮಾನತೆ'ಯನ್ನು ಹೇಳುತ್ತದೆ.ಸಮತ್ವ ಎಂದರೆ ತನ್ನೊಳಗೆ ಯೋಗದ ಮೂಲಕ... ತನ್ನ ಉಸಿರಾಟದಲ್ಲಿ,ಮನಸ್ಸಿನಲ್ಲಿ,ಆರೋಗ್ಯದಲ್ಲಿ ಸಮಸ್ಥಿತಿಯನ್ನು ಸಾಧಿಸಬೇಕು. ಸಮಾನತೆ ಎಂದರೆ ಹೊರಗೆ... ಎಲ್ಲರನ್ನೂ ಸಮಾನರಾಗಿ ನೋಡುವಂತ ಒಂದು ದೃಷ್ಟಿ ಇದಕ್ಕೆ ಭಗವದ್ಗೀತೆಯಲ್ಲಿ ಬಹಳ ಉಲ್ಲೆಖಬರುತ್ತದೆ. ಉದಾಹರಣೆಗೆ ೬ನೇ ಅಧ್ಯಾಯದಲ್ಲಿ-
ಆತ್ಮೌಪಮ್ಯೇನ ಸರ್ವತ್ರ ಸಮಂ ಪಷ್ಯತಿ ಯೋರ್ಜುನ|
ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ||
'ಯಾರು ತನ್ನಂತೆ ಪರರನ್ನು ನೋಡುತ್ತಾನೆಯೋ ಅವನು ನಿಜವಾದ ಯೋಗಿ' ಇದು ಈ ಶ್ಲೋಕದ ಸಂಕ್ಷಿಪ್ತ ತಾತ್ಪರ್ಯ. ಎಲ್ಲರೊಳಗೂ ತನ್ನಂತೆಯೇ  ನೋಡುವಂಥ ದೃಷ್ಟಿ ಬಂದರೆ ಮಾತ್ರ ಅವನು ಯೋಗದಲ್ಲಿ ಮುಂದುವರಿದಿದ್ದಾನೆ ಎಂದರ್ಥ. ಯೋಗದಲ್ಲಿ ಸಾಕಷ್ಟು ಮುಂದುವರಿದವನಿಗೆ ಅದು ಬರುತ್ತದೆ. ಅದು ಬರದೆ ಇದ್ದರೆ ಅವನ ಸಾಧನೆ ಪೂರ್ತಿಯಾಗಲಿಲ್ಲ ಎಒಂದು ಅರ್ಥೈಸಿಕೊಳ್ಳಬಹುದು. ೬ನೇ ಅಧ್ಯಾಯದಲ್ಲಿ ಯೋಗದ ನಿರೂಪಣೆ ಬರುತ್ತದೆ. ಆನಿರೂಪಣೆ ಮಾದೀದ ಕೊನೆಯಲ್ಲಿ ಈ ಮಾತು ಬರುತ್ತದೆ. ಯೋಗಿಗೆ ಆತ್ಮ ವಿಮರ್ಶೆ ಮಾಡಿಕೊಳ್ಳಲಿಕ್ಕೆ ಈ ಮಾತನ್ನು ಹೇಳಿದ್ದಾನೆ. ಹೀಗೆ ಯೊಗ ಸಾಧನೆಯನ್ನೇ ಪ್ರಮುಖವಾಗಿ ಹೇಳುವ ಗ್ರಂಥ ಭಗವದ್ಗೀತೆ. ಭಗವದ್ಗೀತೆಯ ನಿಜವಾದ ಆದರ್ಶ 'ಸಮಾನತೆ' ಸಾಮಾಜಿಕ  ಅನ್ಯಾಯದ ವಿಷಯ ಭಗವದ್ಗೀತೆಯಲ್ಲಿ ಇಲ್ಲವೇ ಇಲ್ಲ
ಕರ್ಮವೀರ: ವಿವಿಧ ಧರ್ಮದವರೂ,ದಲಿತರೂ.ಈ ಹಿಂದೆ ಭಗವದ್ಗೀತಾ ಅಭಿಯಾನದಲ್ಲಿ ಪಾಲ್ಗೊಂಡಿದಾನ್ನು ಕೇಳಿದ್ದೆವೆ. ಹೀಗಿದ್ದಾಗ್ಯೂ  ಕೋಲಾರದ ಘಟನೆಯ ನಂತರ,ದಲಿತರ ಆಕ್ರೋಶ ಎನ್ನುವಂಥದ್ದು ಮಾಧ್ಯಮಗಳಲ್ಲಿ ಬಿಂಬಿತವಾಗುತ್ತಿದೆ.ಈ ಬಗ್ಗೆ ತಾವೇನು ಹೇಳುವಿರಿ?
ಶ್ರೀಗಳು: ಕೋಲಾರದ ಈ ಘಟನೆ ನಡೆಯಲು ಹಿನ್ನಲೆಯಲ್ಲಿ ಬೇರೆ ಯಾರೋ  ಇರಬಹುದೆಂದು ಕಾಣುತ್ತದೆ. ಹಾಗಿಲ್ಲದಿದ್ದರೆ ದಲಿತರು ಹಾಗೆ ಮಾಡುತ್ತಿರಲಿಲ್ಲವೇನೋ ಅನಿಸುತ್ತದೆ ಈ ಹಿಂದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗೀತಾ ಅಭಿಯಾನ ನಡೆದಾಗ ದಲಿತರು,ಕ್ರಿಶ್ಚಿಯನ್ನರು,ಮುಸಲ್ಮಾನರು... ಇನ್ನೂ ಬೇರೆ-ಬೇರೆ ಸಮುದಾಯದವರೆಲ್ಲರೂ ಭಗವದ್ಗೀತೆಯನ್ನು ಕಲಿತಿದ್ದಾರೆ.
ಕರ್ಮವೀರ: ಇದು ಕೇಸರೀಕರಣದ ಹುನ್ನಾರ,ಸ್ವರ್ಣವಲ್ಲಿ ಶ್ರೀಗಳನ್ನು ಮುಂದಿರಿಸಿಕೊಂಡು ಆರ್.ಎಸ್.ಎಸ್.ನವರಿಂದ ಈ ರೀತಿ ಕೋಮು ಸೌಹಾರ್ದತೆಯನ್ನು ಕೆಣಕುವಂಥದ್ದು ನಡೆಯುತ್ತಿದೆ ಎನ್ನುವುದುಕೆಲವರ ಅಭಿಪ್ರಾಯ. ಇದಕ್ಕೆ ತಮ್ಮ ಪ್ರತಿಕ್ರಿಯೆ ಏನು?
ಶ್ರೀಗಳು:ಆರ್.ಎಸ್.ಎಸ್.ನವರಿಗೂ,ಅಥವಾ ಸಂಘಪರಿವಾರದವರಿಗೂ ಈ ಭಗವದ್ಗೀತಾ ಅಭಿಯಾನಕ್ಕೂ ನೀವು ಅಂದುಕೊಂಡಂತೆ ಸಂಬಂಧ ಇಲ್ಲ.ನಾವು ಎಲ್ಲ ಕೆಲಸಗಳಲ್ಲಿಯೂ ಯಾರು ನಮಗೆ ಸಹಕಾರ ಕೊಡುತ್ತಾರೆಯೋ ಅವರ ಸಹಕಾರವನ್ನು ತೆಗೆದುಕೊಂಡು ಹೋಗುತ್ತಿರುತ್ತೇವೆ. ಅದು ಸಹಜ. ಕೆಲಸವಾಗುವದು ನಮಗೆ ಮುಖ್ಯ. ಆ ಹಿನ್ನಲೆಯಲ್ಲಿ ಕೆಲವುಕಡೆ ಸಂಘಪರಿವಾರದ ಕೆಲವು ಕಾರ್ಯಕರ್ತರು ವೈಯಕ್ತಿಕವಾಗಿ ಇದರಲ್ಲಿ ಭಾಗವಹಿಸಿ ಕೆಲಸ ಮಾಡಿದ್ದಾರೆ.ಕೇಸರೀಕರಣವಂತೂ ಅಲ್ಲವೇ ಅಲ್ಲ.ಯಾಕೆಂದರೆ ಮತಾಂತರ ಅಥವಾ ಬೇರೆ ರೀತಿಯ ಯಾವುದೇ ಆಮಿಷಗಳು ಇಲ್ಲಿ ಇಲ್ಲವೇ ಇಲ್ಲ. ಭಗವದ್ಗೀತೆಯಲ್ಲಿನ ಒಳ್ಳೆಯ ವಿಷಯಗಳನ್ನು ಗಮನಿಸಲು ನಾವು ಹೇಳುತ್ತೆವೆ.
ಬಹುತೇಕ ಮಾಧ್ಯಮಗಳು ಒಂದು ತಪ್ಪನ್ನು ಮಾಡುತ್ತಿವೆ. ಏನೆಂದರೆ ೧೪ ಮತ್ತು ೧೫ನೆ ಅಧ್ಯಾಯದಲ್ಲಿ, ವರ್ಣವ್ಯವಸ್ಥೆಯ ಬಗ್ಗೆ, ಬ್ರಹ್ಮಣ್ಯದ ಬಗ್ಗೆ ಉಲ್ಲೇಖ ಇದೆ ಎಂದು ಪ್ರಕಟಿಸುತ್ತಿವೆ. ಆದರೆ ಇವುಗಳಲ್ಲಿ ಈ ಬಗ್ಗೆ ಪ್ರಸ್ತಾಪ ಇಲ್ಲವೇ ಇಲ್ಲ. ಆದ್ದರಿಂದ ಕೇಸರೀಕರಣ,ಸಂಘಪರಿವಾರದ ಹಿನ್ನೆಲೆ ಮುಂತಾಗಿ ಆರೋಪ ಮಾಡುವವರಿಗೆ ಸಂಘಪರಿವಾರದ ಬಗ್ಗೆ ಆರ್.ಎಸ್.ಎಸ್. ನ ಬಗ್ಗೆ ಏನೋ ಒಂದು ಆಗ್ರಹವಿದೆ ಎನ್ನುವದನ್ನು ತೋರಿಸುತ್ತದೆ. ಭಗವದ್ಗೀತಾ ಅಭಿಯಾನ ಈ ಹಿನ್ನೆಲೆಯಲ್ಲಿ ಹೊರಟೇ ಇಲ್ಲ.
ಅಭಿಯಾನ ಯಾಕಾಗಿ ಹೊರಟಿದೆ? ಎನ್ನುವದಾದರೆ ಭಗವದ್ಗೀತೆಯನ್ನು ಪೂರ್ತಿಯಾಗಿ ಗುರುಮುಖದಲ್ಲಿ, ಭಾಷ್ಯಸಹಿತನಾಗಿ ಓದುವಂತಹ  ಅವಕಾಶ ಬಹಳ ವರ್ಷದ ಹಿಂದೆ ನಮಗೆ ಸಿಕ್ಕಿತು. ಅದನ್ನು ಓದಿದ ನಂತರ ಅದು ನಮಗೆ ಮೆಚ್ಚುಗೆಯ ಗ್ರಂಥವಾಯಿತು. ಈ ಗ್ರಂಥದ ಸವಿಯನ್ನು ಇನ್ನೂ ನಾಲ್ಕು ಜನರಿಗೆ ಹಂಚಬೆಕೆನ್ನುವ ಭಾವನೆ ಹುಟ್ಟಿತು. ಮತ್ತು ಈಗಿನ ಕಾಲದ ಪರಿಸ್ಥಿತಿಯನ್ನು ನೋದಿ ಭಗವದ್ಗೀತಾ ಅಭಿಯಾನವನ್ನು ಮಾಡಬೇಕೆನ್ನುವ ಪ್ರೇರಣೆ ಹುಟ್ಟಿತು. ಮನುಷ್ಯನ ಮಾನಸಿಕ ಪರಿಸ್ಥಿತಿ ಬಹಳ ಹಾಳಾಗಿದೆ.
ಅನೇಕ ಮನೋರೋಗಗಳಿಗೆ  ಒಳಗಾಗುತ್ತಿದ್ದಾನೆ,ಆತ್ಮಹತ್ಯೆ ಪ್ರಕರಣಗಳು, ಕುಟುಂಬ ಕಲಹಗಳು,ವಿವಾಹ ವಿಚ್ಛೇದನ ಪ್ರಕರಣಗಳು ಜಾಸ್ತಿಯಾಗುತ್ತಿರುವದು ಇದಕ್ಕೆ ಒಂದು ನಿದರ್ಶನ. ಅಂಕಿ-ಅಂಶಗಳನ್ನು ನೋಡಿದರೆ ಇವುಗಳು ಹೆಚ್ಚಾಗುತ್ತಿರುವುದು ಖಚಿತವಾಗಿ ಗೊತ್ತಗುತ್ತವೆ. ಒಳ್ಳೆಯ ವಿದ್ಯಾವಂತರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭಯೋತ್ಪಾದಕರಾಗುತ್ತಿದ್ದಾರೆ. ಇವೆಲ್ಲವನ್ನು ನೋಡಿದಾಗ ನಾವು ಒಳ್ಳೆಯ ಮೌಲ್ಯವನ್ನು,ಜನಜೀವನಕ್ಕೆ ಅನುಕೂಲವಾಗುವ ಮಾರ್ಗದರ್ಶನಗಳನ್ನು ಜನರಿಗೆ ಕೊಡಬೇಕೆನ್ನುವ ಹಿನ್ನೆಲೆಯಲ್ಲಿ ಭಗವದ್ಗೀತಾ ಅಭಿಯಾನ ನಮ್ಮ ಸ್ವಂತ ಆಲೋಚನೆಯಲ್ಲಿ ಪ್ರಾರಂಭವಾಗಿದೆ. ಇದು ಅಹಂಕಾರದ ಮಾತಲ್ಲ. ಆದ್ದರಿಂದ ಯಾರೂ ಕೂಡಾ ಅಭಿಯಾನವನ್ನು ತಪ್ಪಾಗಿ ಅರ್ಥೈಸಬಾರದು ನಾವು ಎಲ್ಲರ ಸಹಕಾರವನ್ನೂ ಕೇಳುತ್ತೇವೆ. ಕೆಳಿದಾಗ ಯಾರು ಮುಂದೆ ಬರುತ್ತಾರೋ ಅವರನ್ನು ಉಪಯೋಗಿಸಿಕೊಂಡು ಕಾರ್ಯಕ್ರಮವನ್ನು ಮಾಡುತ್ತೆವೆ. ಆ ಸಂದರ್ಭದಲ್ಲಿ ಸಂಘಪರಿವಾರಕ್ಕೆ ಸಂಬಂದಿಸಿದ ಕಾರ್ಯಕರ್ತರು ನಮಗೆ ಸಹಕರಿಸಿದ್ದುಂಟು. ಆದರೆ ಬಹು ಮುಖ್ಯವಾಗಿ ನೆನಪಿಡಬೇಕಾದ ಸಂಗತಿಯೆಂದರೆ ಅಭಿಯಾನದುದ್ದಕ್ಕೂ ಕಾಂಗ್ರೆಸ್,ಜೆ.ಡಿ.ಎಸ್, ಬಿ.ಜೆ.ಪಿ ಸೇರಿದಂತೆ ಬಹುತೇಕ ಎಲ್ಲ ಪಕ್ಷಗಳ ಕಾರ್ಯಕರ್ತರೂ ಅಭಿಯಾನಕ್ಕೆ ಈ ತನಕ ಸಹಕರಿಸಿದ್ದಾರೆ. ಸಭಾ ಕಾರ್ಯಕ್ರಮಗಳಲ್ಲಿ  ಎಲ್ಲ ಪಕ್ಷದವರೂ, ಎಲ್ಲ ಸಮುದಾಯದವರೂ ಭಾಗವಹಿಸಿದ್ದಾರೆ
ಕರ್ಮವೀರ: ಸರಕಾರದ ಆರ್ಥಿಕ ನೆರವು ಗೀತಾಭಿಯಾನಕ್ಕೆ ಇದಯೆ?
ಶ್ರೀಗಳು: ಸರಕಾರದ ಆರ್ಥಿಕ ನೆರವನ್ನು ನಾವು ಒತ್ತಾಯಿಸಿ ಕೇಳಲೂ ಇಲ್ಲ. ಅವರು ಕೊಡಲೂ ಇಲ್ಲ. ಸರಕಾರಕ್ಕೂ ಈ ಅಭಿಯಾನಕ್ಕೂ ಇರುವ ಸಂಬಂಧ ಎನೆಂದರೆ- ಅಭಿಯಾನವನ್ನು ಶಾಲೆಗಳಲ್ಲಿ ನೆಡೆಸುವದಕ್ಕೆ ಅನುಮತಿಯನ್ನು ಕೊಡಿ  ಎಂದು ಕೇಳಿದ್ದೇವೆ. ಅವರು ಯಾರುಗೆ ಒಪ್ಪಿಗೆ ಇದಯೋ ಅವರು ನೆಡೆಸಬಹುದು ಎಂದು ಅನುಮತಿಯನ್ನು ಕೊಟ್ಟಿದ್ದಾರೆ. ಈ ಒಂದು ಆದೇಶ ಬಿಟ್ಟರೆ ಸರಕಾರಕ್ಕೂ ಈ ಅಭಿಯಾನಕ್ಕೂ ಯಾವುದೇ ಸಂಬಂದವಿಲ್ಲ. ಈಗ ಈ ಕೋಲಾರದ ಘಟನೆಯ ನಂತರ ನಮಗೆ ರಕ್ಷಣೆ ಕೊಡಿ ಎಂದು ಕೇಳಿದ್ದುಂಟು. ಸರಕಾರದಿಂದ ಆರ್ಥಿಕ ಸಹಕಾರ ಇದೆ ಎಂದು ಕಲ್ಪಿಸಿಕೊಳ್ಳುವದನ್ನು ಕೇಳಿದರೆ ಬಹಳ ಬೇಸರ ಆಗುತ್ತಿದೆ.
ಕರ್ಮವೀರ: ದೇಶದಲ್ಲಿ ಎಷ್ಟೋಂದು ಭಯೋತ್ಪಾದನಾ ಚಟುವಟಿಕೆಗಳು ನೆಡೆಯುತ್ತಿವೆ. ಅದರ ಬಗ್ಗೆ ವಿಚಾರವಾದಿಗಳು ಚಕಾರ ಎತ್ತಲಿಲ್ಲ. ಈ ಭಗವದ್ಗೀತೆಯ ಬಗ್ಗೆ ಆಕ್ಷೇಪಿಸುತ್ತಾ ಇದ್ದಾರೆ ಈ ಕುರಿತು ತಮ್ಮ ಅನಿಸಿಕೆ ಏನು?
ಶ್ರೀಗಳು: ಇದಕ್ಕೆ ನಮ್ಮದೊಂದು ಪ್ರಶ್ನೆ ಇದೆ.ಭಗವದ್ಗೀತೆಯನ್ನು ಮಕ್ಕಳಿಗೆ ಹೇಳಿ ಕೊಡುವದು ಬೇಡ ಎಂದಾದರೆ ಹೆಚ್ಚುತ್ತಿರುವ ಮಾನಸಿಕ ದೌರ್ಬಲ್ಯ,ಆತ್ಮಹತ್ಯೆ ಪ್ರಕರಣಗಳು, ಮಾನಸಿಕರೋಗಗಳು, ಮಾನಸಿಕತೆಯ ಮೂಲದಿಂದ ಬರುತ್ತಿರುವ ರೋಗಗಳು ಮತ್ತು ಸುಶಿಕ್ಷಿತರು ಭಯೋತ್ಪಾದಕರಾಗುತ್ತಿರುವದು ಹೆಚ್ಚುತ್ತಲಿದೆ. ಇದಕ್ಕೆ ಏನು ಪರಿಹಾರ ಕೊಡುತ್ತೀರಿ? ಇದು ನಮ್ಮ ಪ್ರಶ್ನೆ. ನೈತಿಕ ಶಿಕ್ಷಣದ ಮೂಲಕ ಪರಿಹಾರ ಕಂಡುಕೊಳ್ಳುತ್ತೇವೆ ಎನ್ನಬಹುದು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಶಿಕ್ಷಣ ಸ್ವಲ್ಪಮಟ್ಟಿಗೆ ಇದೆ. ಆದರೆ ಅದಕ್ಕೆ ತಳಪಾಯವೇ ಇಲ್ಲ. ಆಧ್ಯಾತ್ಮಿಕತೆ ಇಲ್ಲದ ನೈತಿಕತೆಯನ್ನು ಕೊಟ್ಟರೆ ಅದು ನಿಲ್ಲುವದಿಲ್ಲ.
"ನೋಡು ದೇವರಿದ್ದಾನೆ! ತಪ್ಪು ಮಾಡಿದರೆ ಪಾಪ ಬರುತ್ತದೆ!" ಈ ರೀತಿಯ ಒಳ್ಳೆಯ ನಂಬಿಕೆಗಳ ತಳಹದಿಯ ಮೇಲೆ ಕೊಡುವ ನೈತಿಕತೆನಿಲ್ಲುತ್ತದೆಯೇ ವಿನಃ ಅದಿಲ್ಲದೆ ನೈತಿಕತೆಯ ಪಾಠವನ್ನು ಎಷ್ಟೇ ಹೇಳಿದರೂ ನೈತಿಕತೆ ನಿಲ್ಲುವದಿಲ್ಲ. ಈ ಹಿನ್ನಲೆಯಲ್ಲಿ ಮುಂದಿಡುವ ಪ್ರಶ್ನೆ ಎನೆಂದರೆ- ಭಗವದ್ಗೀತೆ ಶಿಕ್ಷಣದಲ್ಲಿ ಬೇಡ ಎಂದರೆ ಹೆಚ್ಚುತ್ತಿರುವ ಮಾನಸಿಕರೋಗಗಳನ್ನು ಕಡಿಮೆ ಮಾಡಲಿಕ್ಕೆ ಏನು ಉಪಾಯ ಹೇಳುತ್ತೀರಿ? ಹೆಚ್ಚುತ್ತಿರುವ ಭಯೋತ್ಪಾದನೆಯಲ್ಲಿ ನಮ್ಮ ಮಕ್ಕಳು ಜೋಡಣೆಯಾಗುತ್ತಿದ್ದಾರೆ ಇದಕ್ಕೆ ಏನು ಪರಿಹಾರ ಒದಗಿಸುತ್ತೀರಿ?
ಕರ್ಮವೀರ: ಭಗವದ್ಗೀತೆಯನ್ನು ಸಾಮಾಜಿಕ ವಿಜ್ಞಾನ ಎನ್ನಬಹುದೇ?
ಶ್ರೀಗಳು: ಹೇಳಬಹುದು. ಆದರೆ ಬರೀ ಸಾಮಾಜಿಕ ಒಂದೇ ಅಲ್ಲ. ಆಧ್ಯಾತ್ಮಿಕ ನೈತಿಕ ಮೌಲ್ಯಗಳೂ ಇದ್ದಾವೆ. ಅದರ ಆಧಾರದ ಮೇಲೆ ಸಮಾಜವನ್ನು ನಿರ್ಮಾಣ ಮಾಡುವ ದೃಷ್ಟಿಯನ್ನು ಇಟ್ಟುಕೊಂಡರೆ ಸಾಮಾಜಿಕ ವಿಜ್ಞಾನ ಎಂದು ಹೇಳಬಹುದು.

                                                     (ಕರ್ಮವೀರ julai 31 ವಾರಪತ್ರಿಕೆಯಿಂದ ಕದ್ದಿದ್ದು)

No comments:

Post a Comment